Wednesday, September 29, 2010

ಆಪ್ತಮಿತ್ರ - ಬದ್ರಿ



ಅದು ೧೯೮೪ ನನ್ನ ಇಂಜನೀರಿಂಗ ಬಾಗಲಕೋಟೆಯಲ್ಲಿ ಮುಗಿAdd Imageಸಿ ಟಿ.ಎಸ್.ಪಿ. ಎಂಬ ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ವರ್ಷ, ನನ್ನ ಉದ್ಯೋಗ ಪರ್ವದ ಮೊದಲ ವರ್ಷ. ಅ ಕಂಪನಿ ಹ್ಯಾಗಿತ್ತೆಂದರೆ ಚಿಕ್ಕ ದಕ್ಷಿಣ ಭಾರತವೆಂದರೆ ಅತಿಶಯೋಕ್ತಿ ಅಲ್ಲ. ಅಲ್ಲಿ ದಕ್ಷಿಣ ಭಾರತದ ಎಲ್ಲ ಭಾಷೆಯ ಜನರು ಇದ್ದರು. ಪ್ರತೀ ವರ್ಷ ಕಾರ್ಮಿಕ ದಿನಾಚರಣೆಯ ಅಂಗವಾಗಿ ಟಿ.ಎಸ್.ಪಿಯಲ್ಲಿ ಆಟೋಟ ಸ್ಪರ್ಧೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ವಾಡಿಕೆ. ಆಂತೆಯೇ ಆ ವರ್ಷವು ಸಾಂಸ್ಕೃತಿಕ ಕಾರ್ಯಕ್ರಮದಡಿಯಲ್ಲಿ ಕನ್ನಡ, ತೆಲುಗು ಹಾಗು ತಮಿಳು ನಾಟಕಗಳು ಪ್ರದರ್ಶನಗೊಳ್ಳಲಿದ್ದವು ಅದಕ್ಕೆ ಕಲಾವಿದರನ್ನು ನಾಟಕ ಸಮಿತಿಯು ಆಹ್ವಾನಿಸಿತ್ತು. ನನ್ನ ಮಾತೃ ಭಾಷೆ ಕನ್ನಡವಾದರು ನಾನು ಕಲೆತಿದ್ದು ತೆಲುಗು ಹೀಗಾಗಿ ನಾನು ತೆಲುಗು ನಾಟಕವೊಂದಕ್ಕೆ ಹೆಸರನ್ನು ಕೊಡಲು ನಿಶ್ಚಯಿಸಿ ಸಮಿತಿಯ ಮುಖ್ಯ ಸಂಚಾಲಕರಾದ ಶ್ರೀ ಎಂ.ಸೋಮಸುಂದರಂ ಹತ್ತಿರ ಹೋಗಿ ನನ್ನ ಇಚ್ಚೆಯನ್ನು ತಿಳಿಸಿದಾಗ ಅದೇ ಸಮಯಕ್ಕೆ ಸರಿಯಾಗಿ ಆ ವರ್ಷದ ತೆಲುಗು ನಾಟಕದ ನಿರ್ದೇಶಕನಾದ ಗಿರಿಜೇಶ್ ಮಠಪತಿಯವರು ಅವರ ಹತ್ತಿರ ತನ್ನ ನಾಟಕಕ್ಕೆ ಕಲಾವಿದರ ಕೊರತೆಯ ಬಗ್ಗೆ ಹೇಳಲು ಬಂದಿದ್ದರು. ಆಗ ಸೋಮಸುಂದರಂ ರವರು "ನೋಡೋ ಗಿರಿಜೇಶ್ ಈ ಹುಡುಗ ತೆಲುಗು ನಾಟಕ ಮಾಡ್ತಾನಂತೆ ನಿನ್ನ ನಾಟಕದಲ್ಲಿ ಯಾವುದಾದರು ಚಿಕ್ಕ ಪಾತ್ರವಿದ್ದರೆ ಕೊಡು" ಅಂತ ಅಂದ್ರು. ನನ್ನನ್ನು ನೋಡುತ್ತಿದ್ದಂತೆ ಅವರು ಸಾರ್ ಎಂಥಹ ಒಳ್ಳೆ ಸುದ್ಧಿ ಹೇಳಿದ್ದೀರಿ ನನಗೆ ಇಂಥವರು ಬೇಕಾಗಿತ್ತು. ಹುಡುಗ ತೆಳ್ಳಗೆ ಬೆಳ್ಳಗೆ, ಉದ್ದಕ್ಕೆ ಚೆನ್ನಾಗಿದ್ದಾನೆ ನನ್ನ ನಾಟಕದಲ್ಲಿ ಇನ್ಸ್ ಪೆಕ್ಟರ್ ಪಾತ್ರಕ್ಕೆ ಫರ್ಪೆಕ್ಟ್ ಆಗಿದ್ದಾನೆ. "ಏನಪ್ಪಾ ಮಡ್ತೀಯಾ" ಅಂತ ಅವರು ನನ್ನ ಕೇಳಿದಾಗ ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಸರಿ ಅಂತ ಹೇಳಿದೆ. ಹೀಗೆ ಟಿ.ಎಸ್.ಪಿಯಲ್ಲಿ ಶುರುವಾದ ನನ್ನ ರಂಗ ಪರ್ವ ಇಂದಿಗೂ ಮುಂದೆವರೆಯುತ್ತಲೇ ಇದೆ. ಇದಕ್ಕೆ ಮುಖ್ಯ ಪ್ರೇರಕ ವ್ಯಕ್ತಿ ನನ್ನ ಆಪ್ತಮಿತ್ರ ರಂಗಭಾರ್ಗವ ರಾಂಪುರ್ ಬದರಿನಾರಾಯಣ (ಬದ್ರಿ).